
ಕಟ್ಟಿಟ್ಟ ಕನಸುಗಳಲಿ
ಬಿಚ್ಚಿಟ್ಟ ಭಾವಗಳಲಿ
ನನ್ನೇ ಮರೆತು ಕುಳಿತಾಗ
ಮಳೆಯಾಗಿ ಬಂದೆ ತಂಪಂತೆ
ಸುತ್ತಿಟ್ಟ ಸ್ಪರ್ಶಗಳಲಿ
ಮುಸುಕಿದ್ದ ಮೌನಗಳಲಿ
ನಿನ್ನೆ ನೆನೆದಾಗ ಹೋಗುವೆ
ಮರೆಯಾಗಿ ಹೊಳೆವ ಮಿಂಚಂತೆ
ತೊಳಲಾಟದ ತಾಳದಲಿ
ಹೂಮನಸ ಹೊಯ್ದಾಟದಲಿ
ನಿನ್ನ ನೆನಪು ಕರೆದಾಗ
ಬರುವೆ ತಿರುಗಿ ಭುವಿಯಂತೆ
ಸಂತಾಪದ ಸುಳಿಗಳಲಿ
ಬೆರಗಿಸಿದ ಭ್ರಮೆಗಳಲಿ
ಕಣ್ಮುಚ್ಚಿ ಕೈ ಬೀಸಿ ಕರೆದಾಗ
ಬಿಗಿದಪ್ಪಿಕೊಂಡೆ ಕಡಲ ಅಲೆಯಂತೆ
ಈ ಯಾಂತ್ರಿಕ ಬದುಕಿನಲಿ
ಈ ಮಾಂತ್ರಿಕ ಲೋಕದಲಿ
ಮರೆಯದಿರು ನನ್ನ
ನನಸಾಗದ ಕನಸಿನಂತೆ
ಕನಸಾಗದ ನನಸಿನಂತೆ
ಮರೆಯದಿರು ನನ್ನ
ನನಸಾಗದ ಕನಸಿನಂತೆ...