Wednesday, 17 December 2014

womens day

ವುಮೆನ್ಸ್ ಡೇ ,


ನಾನು ಒಂದಿನ ಅಮ್ಮಂಗೆ ಒಂದು ಪ್ರಶ್ನೆ ಕೇಳ್ದೆ

ಅಮ್ಮ, ಮದುವೆ ಆದ್ಮೇಲೆ ಹುಡುಗಿನೇ ಯಾಕೆ ಗಂಡನ ಮನೆಗೆ ಹೋಗ್ಬೇಕು?
ಹೆಣ್ಣು ಅಂದ್ರೆ ಬೆಳಕು,  ಗಂಡನ ಮನೆ ಬೆಳಗೋಕೆ ಅವ್ಳು ಹುಟ್ಟಿದ ಮನೆಯನ್ನ ಬಿಟ್ಟು ಹೋಗಲೇ ಬೇಕು ಅಂತಾ 
ಅಮ್ಮನ ಉತ್ತರದಲ್ಲಿ ತರ್ಕ ಇರ್ಲಿಲ್ಲ ಆದ್ರೂ  ಒಪ್ಕೊಂಡೆ
ಯಾಕಂದ್ರೆ ನಮ್ಮ ಭಾರತೀಯ ಸಂಪ್ರದಾಯದಲ್ಲಿ ಈ ತರಹದ ಸತ್ಯ ಅಲ್ಲದ ಮಿಥ್ಯಗಳು ತುಂಬಾ.

ನನ್ನ ಬ್ಲಾಗ್ ಮುಖಾಂತರ ಎಲ್ಲಾ ಹುಡುಗರಿಗೂ ನಾನು ಇದನ್ನ ಹೇಳೋಕೆ ಇಷ್ಟಪಡ್ತೀನಿ
ಈಗಿನ ದಿನಗಳಲ್ಲಿ ಯಾರೇ ಆಗ್ಲಿ ಇಪ್ಪತ್ತೈದು ವಯಸ್ಸಿನೊಳಗೆ ಮದುವೆ ಆಗಲ್ಲ,
ಆ ಇಪ್ಪತ್ತೈದು ವರ್ಷಗಳಲ್ಲಿ ಅವಳಿಗೂ ಸಹ ನಿಮ್ಮ ಹಾಗೆ ತುಂಬಾ ಜನ ಸ್ನೇಹಿತರು ಇರ್ತಾರೆ
ನಿಮ್ಮನ್ನ ನಿಮ್ಮ ಮನೆಯಲ್ಲಿ ಎಷ್ಟು ಪ್ರೀತಿಯಿಂದ ಬೆಳಸಿರ್ತಾರೂ ನಿಮ್ಮ ಹೆಂಡ್ತಿ ಆಗಿ ಬರೋ ಹುಡುಗಿ ಕೂಡ ಅದೇ ರೀತಿ ಬೆಳೆದಿರ್ತಾಳೆ
ಮದುವೆ ನಂತರ ಆ ಎಲ್ಲ ಸಂಭಂಧಗಳಿಗು ಅವ್ಳು ಅಲ್ಪ ವಿರಾಮ ಇಡಲೇಬೇಕು
ನಾನು ಗಮನಿಸಿದ ಪ್ರಕಾರ ಈಗಿನ ಗಂಡಂದಿರು ತುಂಬಾನೇ ಕೊಆಪರಟಿವೆ , ಮನೆಗೆಲಸದಲ್ಲಿ ಸಹಾಯ ಮಾಡ್ತಾರೆ , ಫ್ರೆಂಡ್ಸ್ ನಾ ಭೇಟಿ ಆಗೊಕೆಲ್ಲ ಬೇಡ ಅನ್ನಲ್ಲ, ಯಾವುದೇ ತರಹದ ನಿರರ್ಥಕ ಕಟ್ಟುಪಾಡುಗಳನ್ನ ಹಾಕಲ್ಲ .
ಆದ್ರೆ ಮದುವೆ ನಂತರ ಅವಳದೇ ಆದ ಜವಾಬ್ದಾರಿಗಳು ಅವಳನ್ನ ಬಂಧಿ ಮಾಡುತ್ತವೆ .
ಮನೆಯ ಎಲ್ಲ ಕೆಲಸ ಕಾರ್ಯಗಳನ್ನ ತುಂಬಾ ಅಚ್ಚುಕಟ್ಟಾಗಿ ನಿಭಾಯಿಸ್ತಾಳೆ
ನಿಮ್ಮ ಅಕ್ಕ ಅಣ್ಣ ತಮ್ಮ ತಂಗಿ ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ತಂದೆ ತಾಯಿಗಳ ಬಗ್ಗೆ ಪ್ರೀತಿ ಕಾಳಜಿ ತೋರಸ್ತಾಳೆ,ನಿಮ್ಮ ಮನೆ ಅವಳ ಅವಿಭಾಜ್ಯ ಅಂಗ ಆಗಿರುತ್ತೆ.
ಅವಳ ಕುಟುಂಬಕ್ಕೂ ಸಮಾನ ಮಾನ್ಯತೆ ಕೊಡುವುದು ಪ್ರತಿಯೊಬ್ಬ ಗಂಡನ ಕರ್ತವ್ಯ
ಮಾನ್ಯತೆ ಕೊಡ್ಬೇಕು ಅಂತ ಯಾವ ಹೆಂಡ್ತಿನು ಕೇಳಲ್ಲ , ಅವ್ಳು ಸಮಯ ಕೊಡ್ತಾಳೆ , ಕಾಯ್ತಾಳೆ .
ಆದ್ರೆ ಅವ್ಳು ಮಾತ್ರ ಮದುವೆ ಆದ ಮರು ದಿನದಿಂದಲೇ ಅವನ ಮನೆಯವಳಾಗಿ ಬಿಡ್ತಾಳೆ .
ಅವಳು ಹೇಗೆ ನಿಮ್ಮ ಪರಿವಾರಕ್ಕೆ ಹತ್ತಿರ ಇರುತ್ತಾಳೋ , ಹಾಗೆ ನೀವು ಸಹ ಅವಳ ಅಕ್ಕ ,ತಂಗಿ , ತಮ್ಮ , ಸಂಭಂದಿಕರ ಜೊತೆ ಅನ್ನ್ಯುನ್ನವಾಗಿರಿ .
ಅವಳ ಬಂಧುಗಳ ಸಮಾರಂಭಗಳಲ್ಲಿ ಪಾಲ್ಗೊಳ್ಳಿ
ನಿಮ್ಮ ಹೆಂಡತಿಯ ನಗು ನಿಮಗೆ ಎಷ್ಟು ಮುಖ್ಯಾನೋ
ಅವಳ ಮನೆಯಲ್ಲೂ ಸಹ ಅಸ್ಟೆ ಮುಖ್ಯ
ಯಾಕೆ ಅಂತೀರಾ ... ಪತಿ ಪತ್ನಿ ಎಲ್ಲದರಲ್ಲು ಸಮಾನರು ಸುಖ, ದುಃಖ, ಪ್ರೀತಿ ,ಸ್ನೇಹ, ಗೌರವ  ಹೀಗೆ ಸುಮಾರು ..........
ಎಲ್ಲಾ ಸರಾಗವಾದಲ್ಲಿ ಪ್ರತಿಯೊಂದು ದಿನವು ವುಮೆನ್ಸ್ ಡೇ ಆಗಿರುತ್ತೆ ,

ತನ್ನ ಜೀವನವನ್ನೇ ನಿಮ್ಮ ಮನೆಗೆ ಕೊಟ್ಟವಳಿಗೆ ಸ್ವಲ್ಪ ಸಂತೋಷ ಕೊಡಿ 























Monday, 12 April 2010

ನನಸಾಗದ ನುಡಿಗಳು....




ಕಟ್ಟಿಟ್ಟ ಕನಸುಗಳಲಿ
ಬಿಚ್ಚಿಟ್ಟ ಭಾವಗಳಲಿ
ನನ್ನೇ ಮರೆತು ಕುಳಿತಾಗ
ಮಳೆಯಾಗಿ ಬಂದೆ ತಂಪಂತೆ

ಸುತ್ತಿಟ್ಟ ಸ್ಪರ್ಶಗಳಲಿ
ಮುಸುಕಿದ್ದ ಮೌನಗಳಲಿ
ನಿನ್ನೆ ನೆನೆದಾಗ ಹೋಗುವೆ
ಮರೆಯಾಗಿ ಹೊಳೆವ ಮಿಂಚಂತೆ

ತೊಳಲಾಟದ ತಾಳದಲಿ
ಹೂಮನಸ ಹೊಯ್ದಾಟದಲಿ
ನಿನ್ನ ನೆನಪು ಕರೆದಾಗ
ಬರುವೆ ತಿರುಗಿ ಭುವಿಯಂತೆ

ಸಂತಾಪದ ಸುಳಿಗಳಲಿ
ಬೆರಗಿಸಿದ ಭ್ರಮೆಗಳಲಿ
ಕಣ್ಮುಚ್ಚಿ ಕೈ ಬೀಸಿ ಕರೆದಾಗ
ಬಿಗಿದಪ್ಪಿಕೊಂಡೆ ಕಡಲ ಅಲೆಯಂತೆ

ಈ ಯಾಂತ್ರಿಕ ಬದುಕಿನಲಿ
ಈ ಮಾಂತ್ರಿಕ ಲೋಕದಲಿ
ಮರೆಯದಿರು ನನ್ನ
ನನಸಾಗದ ಕನಸಿನಂತೆ
ಕನಸಾಗದ ನನಸಿನಂತೆ
ಮರೆಯದಿರು ನನ್ನ
ನನಸಾಗದ ಕನಸಿನಂತೆ...






Sunday, 14 March 2010

ನೀನಾರು....????......



ಎಳೆ ಬಿಸಿಲ ಕಿರಣಕೆ
ಇಬ್ಬನಿ ಹೊಳೆವ ಮುತ್ತಂತೆ

ಮಳೆ ಹನಿಯ ಸ್ಪರ್ಶಕೆ
ಘಮ ಘಮಿಸುವ ಮಣ್ಣಂತೆ

ಅಲೆ ಅಪ್ಪಿದ ನಾದಕೆ
ಕಡಲೇ ಹಾಡಿ ಕುಣಿದಂತೆ

ಹಕ್ಕಿಯ ಚಿಲಿಪಿಲಿ ಕಲರವಕೆ
ಮುಂಜಾವು ನಾಚಿ ನಿಂತಂತೆ

ಬಾನ ಕೆಂಪು ಕಾಣಿಕೆ
ರವಿಗೆ ತಾಯ ಮಡಿಲಿನಂತೆ

ಮನವೆಂಬ ಹೂತೋಟಕೆ
ನಿನ್ನ ನಗುವೇ ಮೊಗ್ಗಂತೆ

ಮನಸು ಸಾರಿ ಸಾರಿ ಹೇಳುತಿದೆ
ನೀನೆಂದಿಗೂ ನನಗಂತೆ
ಕನಸು ಬಾರಿ ಬಾರಿ ಬೀಳುತಿದೆ
ನೀನೆ ನನ್ನ ಬಾಳಂತೆ
ನೀನೆ ನನ್ನ ಬದುಕಂತೆ
ನಾನೆಂದಿಗೂ ನಿನ್ನವಳಾದಂತೆ
ಯಾರು ಗೆಳೆಯ ನೀನಾರು.??....
ಹೇಳು ಗೆಳೆಯ ನೀನಾರು .??....

Thursday, 28 January 2010

ನನ್ನಾಸೆಯ ಕನಸುಗಳು




ನಿನ್ನ ಬಿಗಿಯಾಗಿ ಅಪ್ಪಿಕೊಂಡಿರಲು
ಕಿವಿಯಲಿ ಏನೋ ಹೇಳುವ ಆಸೆ

ನೀ ನನ್ನ ಮಡಿಲಲಿ ಮಲಗಿರಲು
ನಿನ್ನ ಹಣೆಗೆ ಮುತ್ತಿಡುವ ಆಸೆ

ನೀ ನನ್ನ ಕರೆದೊಯ್ಯಲು
ನಿನ್ನ ಕೈ ಹಿಡಿದೇ ನಡೆಯುವ ಆಸೆ

ನಿನ್ನ ಕಪ್ಪು ಕಣ್ಣುಗಳಲಿ
ಪ್ರೀತಿಯ ಬೆಳಕು ನೋಡುವ ಆಸೆ

ನಿನ್ನ ವಿಸ್ಮಯ ಲೋಕದಲಿ
ಜೊತೆಗೂಡಿ ಬಾಳುವ ಆಸೆ

ನನ್ನಾಸೆಯ ನುಡಿಯನು ಬದಿಗಿಟ್ಟು ಕೇಳುವೆನು
ಹೇಳು ಗೆಳೆಯ ನಿನ್ನಾಸೆಯ ಸಾಲುಗಳನು

ದೇವರೇ ಬೆರಗಾಗಿ ನಿಂತು ನೋಡುವನು
ನಮ್ಮಿಬ್ಬರ ಸಂತೋಷದ ಕ್ಷಣಗಳನು
ಎಲ್ಲ ಕಷ್ಟಗಳಿಗೂ ನಾಂದಿ ಹಾಡುವನು
ಉಳಿಸಲು ನಮ್ಮ ನಗುವನು
ಉಳಿಸಲು ನಮ್ಮ ನಗುವನು

Wednesday, 20 January 2010

ನಿನಗಾಗಿ ಕಾದಿರುವೆ....


ನಿನಗಾಗಿ ಕಾದಿರುವೆ....

ಹೃದಯದಲಿ ಮಣ್ಣಾಗಿವೆ ಮಧುರ ಭಾವಗಳು
ಹೇಗೆ ತೋಡಲಿ ಗೆಳೆಯ ,

ಮೋಡಗಳಿವೆ ಆಗಸದಿ
ಹನಿಗಾಗಿ ಕಾದಿರುವೆ ,

ಕೊಲ್ಮಿಂಚಿದೆ ಬಾನಿನಲಿ
ಬೆಳಕಿಗಾಗಿ ಕಾದಿರುವೆ ,

ಮುಳುಗುತಿಹೆ ನೀರಿನಲಿ
ಆಸರೆಗಾಗಿ ಕಾದಿರುವೆ,

ನಿನ್ನೇ ಕಂಡೆ ಪ್ರತಿ ಕನಸಿನಲಿ
ನಿನಗಾಗಿ ಕಾದಿರುವೆ ,

ಎಂದೆಂದಿಗೂ ಬಯಸೆನು ನಿನ್ನಿಂದ ಪ್ರೀತಿಯನು
ಯಾಕೆಂದರೆ ಗೆಳೆಯ
ನೀನಾರಿಗೋ ಕಾದಿರುವೆ .............
ನೀನಾರಿಗೋ ಕಾದಿರುವೆ .............

Thursday, 14 January 2010



ಕ್ಷೆಮಿಸಿಬಿಡು ನನ್ನ
ಮರೆಯಲಾಗದು ನಿನ್ನ

ನಿನ್ನ ಮುದ್ದು ಮುಖ ಅರಳುತ್ತಿತ್ತು
ಹೇಳಿದಾಗಲೆಲ್ಲ ಸಣ್ಣ ಅಚ್ಚರಿಗಳನು

ಕೆಂಡದಂತಹ ಕೋಪ ನಾಚಿ ನೀರಾಗುತ್ತಿತ್ತು
ಕಂಡಾಗ ನಿನ್ನ ತುಂಟ ನಗುವನು

ಮಧ್ಯ ರಾತ್ರಿಯೂ ಮನಸು ಕಾಯುತ್ತಿತ್ತು
ಓದಲು ನಿನ್ನ ಸಿಹಿ ಸಂದೇಶವನು

ನಿನ್ನ ಬೆಳಕಿನ ಬಿಂಬವೇ ಮೂಡುತ್ತಿತ್ತು
ನೋಡಿದಾಗಲೆಲ್ಲ ಪ್ರತಿ ಕನ್ನಡಿಯನು
ನನ್ನ ಹಿಂದೆ ಬಂದು ನಿಂತಂತೆ
ನನ್ನ ಜೊತೆಗೆ ನೀನಿರುವಂತೆ

ಹೇಗೆ ಮರೆಯಲಿ ಆ ಮುದ್ದು ಮುಖವ
ಹೇಗೆ ಮರೆಯಲಿ ಆ ತುಂಟ ನಗುವ
ಹೇಗೆ ಮರೆಯಲಿ ಸಿಹಿ ಸಂದೇಶವ

ಕ್ಷೆಮಿಸಿಬಿಡು ನನ್ನ
ಮರೆಯಲಾಗದು ನಿನ್ನ

ಮರೆಯಲಾರೆನು ನಿನ್ನ




Wednesday, 13 January 2010